Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಯರಿದ್ದಾರೆ...ಏನಿದರ ಅರ್ಥ ?

ಇತ್ತೀಚಿನ ದಿನಗಳಲ್ಲಿ ನೀವು ಸಾಮಾಜಿಕ ಜಾಲತಾಣಗಳ ರೀಲ್ಸ್‌, ಪೋಸ್ಟ್‌ಗಳಿಂದ ಹಿಡಿದು ರಸ್ತೆಯಲ್ಲಿ ಚಲಿಸುವ ವಾಹನಗಳ ಹಿಂಭಾಗದವರೆಗೆ ಒಂದು ಶಬ್ದವನ್ನು ಕಣ್ಣುಂಬಿಕೊಳ್ಳುತ್ತಿರುತ್ತೀರಿ — ಅದೇ "ರಾಯರಿದ್ದಾರೆ!".

ಯಾಕೆ ಹೀಗೆ? ಏನಿದರ ಅರ್ಥ?

'ರಾಯರಿದ್ದಾರೆ' ಎಂದರೆ ಕೇವಲ ಎರಡು ಅಕ್ಷರಗಳ ಪದವಲ್ಲ; ಅದು ಕೋಟ್ಯಂತರ ಭಕ್ತರ ಪಾಲಿನ ರಕ್ಷಾಕವಚ. ಈ ಶಬ್ದವನ್ನು ಒಮ್ಮೆ ಕಣ್ಣಾರೆ ಓದಿದರೆ, ಬಾಯಾರೆ ಉಚ್ಚರಿಸಿದರೆ ರಾಯರ ಭಕ್ತರ ಮನಸ್ಸಿಗೆ ಸಿಗುವ ಆನಂದ, ನೆಮ್ಮದಿ ಅಷ್ಟಿಷ್ಟಲ್ಲ. ಅದು ಸೋತ ಬದುಕಿಗೆ ಹೊಸ ಶಕ್ತಿಯನ್ನು ತುಂಬುತ್ತದೆ, ಕತ್ತಲ ಹಾದಿಯಲ್ಲಿ ನಾಳೆಯ ದಿನಗಳ ಬಗ್ಗೆ ಹೊಸ ಭರವಸೆಯನ್ನು ಮೂಡಿಸುತ್ತದೆ.

ಮೂರೂವರೆ ಶತಮಾನಗಳ ಜೀವಂತ ಪವಾಡ

ಇಂದಿಗೆ ಸುಮಾರು ಮೂರೂವರೆ ಶತಮಾನಗಳ ಹಿಂದೆ ಮಂತ್ರಾಲಯದ ಪವಿತ್ರ ಭೂಮಿಯಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆ ಇಂದಿಗೂ ಜಗತ್ತಿನಾದ್ಯಂತ ಜಾಗೃತವಾಗಿದೆ. ರಾಯರ ಪವಾಡಗಳು ಕೇವಲ ಇತಿಹಾಸದ ಪುಟಗಳಲ್ಲಷ್ಟೇ ಇಲ್ಲ, ಇಂದಿಗೂ ಲಕ್ಷಾಂತರ ಜನರ ದೈನಂದಿನ ಬದುಕಿನಲ್ಲಿ ದಿನನಿತ್ಯವೂ ನಡೆಯುತ್ತಲೇ ಇವೆ. "ಏನೇ ಆಗಲಿ, ನನ್ನ ಜೊತೆಗೆ ರಾಯರಿದ್ದಾರೆ" ಎನ್ನುವ ದೃಢವಾದ ನಂಬಿಕೆ ಇದೆಯಲ್ಲ... ಅದು ಧರ್ಮದ ಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬ ಭಕ್ತನಿಗೂ ಒಂದು ಅದಮ್ಯ ಚೇತನವನ್ನು, ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ರಾಯರ ನಿಜವಾದ ಭಕ್ತರಿಗೆ ಈ ಅನುಭೂತಿ ಚೆನ್ನಾಗಿಯೇ ಗೊತ್ತು!

ಮಂತ್ರಾಲಯ: ಪ್ರೀತಿಯ ತವರ ಮನೆ

ನಮಗೆ ಮಂತ್ರಾಲಯಕ್ಕೆ ಹೋಗುವುದೆಂದರೆ ಯಾವುದೇ ತೀರ್ಥಕ್ಷೇತ್ರಕ್ಕೆ ಹೋದಂತಹ ಭಾವನೆಯಲ್ಲ. ನಾವು ನಮ್ಮ ಅತ್ಯಂತ ಪ್ರೀತಿಪಾತ್ರರ, ನಮ್ಮನ್ನು ಹೆತ್ತು ಹೊತ್ತವರ ಮನೆಗೆ ಹೋಗುವಾಗ ಮನಸ್ಸಿನಲ್ಲಿ ಎಷ್ಟು ಪ್ರೀತಿ, ಆತುರ ಮತ್ತು ಸಮಾಧಾನವಿರುತ್ತದೆಯೋ, ಮಂತ್ರಾಲಯಕ್ಕೆ ಕಾಲಿಟ್ಟಾಗಲೂ ಅದೇ ಭಾವನೆ ಮೂಡುತ್ತದೆ. ಅಲ್ಲಿ ಭಯ-ಭಕ್ತಿಗಿಂತಲೂ ಹೆಚ್ಚಾಗಿ, ನಮ್ಮನ್ನು ಅತಿಯಾಗಿ ಪ್ರೀತಿಸುವ ಮತ್ತು ನಾವು ಅತಿಯಾಗಿ ಹಚ್ಚಿಕೊಂಡಿರುವ ಒಂದು ಅಗೋಚರವಾದ ದಿವ್ಯ ಹೃದಯ ನಮ್ಮನ್ನು ಕರೆಯುತ್ತಿದೆ ಎಂಬ ಹಿತವಾದ ಅನುಭವವಾಗುತ್ತದೆ. ಬೃಂದಾವನದ ಮುಂದೆ ನಿಂತಾಗ, ರಾಯರು ನಮ್ಮನ್ನು ಆಶೀರ್ವದಿಸುತ್ತಾ, "ನಿನ್ನೊಂದಿಗೇ ನಾನಿದ್ದೇನೆ, ಹೆದರಬೇಡ..." ಎಂದು ಕಿವಿಯಲ್ಲಿ ಪಿಸುಗುಟ್ಟಿ ಭರವಸೆ ತುಂಬುವಂತೆ ಭಾಸವಾಗುತ್ತದೆ.

ವೃತ್ತಿ ಜೀವನದ ಪರಮ ಸೌಭಾಗ್ಯ

ಕಳೆದ 16 ವರ್ಷಗಳಿಂದ ರೆಡ್ ಎಫ್‌ಎಂ (Red FM) ನಲ್ಲಿ ರೇಡಿಯೋ ಜಾಕಿಯಾಗಿ (Radio Jockey) ಕೆಲಸ ಮಾಡುವ ಸಂದರ್ಭದಲ್ಲಿ, ವೃತ್ತಿ ಜೀವನದ ಪ್ರತಿಯೊಂದು ಒತ್ತಡದ ಕ್ಷಣದಲ್ಲೂ ಮನಸ್ಸಿಗೆ ಹೊಸ ಹುರುಪನ್ನು, ಉತ್ಸಾಹವನ್ನು ಕೊಟ್ಟಿದ್ದು ಇದೇ 'ರಾಯರಿದ್ದಾರೆ' ಎನ್ನುವ ದಿವ್ಯ ಭಾವನೆ. ಕೊರೊನಾ ಮಹಾಮಾರಿಯ ಕಠಿಣ ಕಾಲವೊಂದನ್ನು ಹೊರತುಪಡಿಸಿ, ಕಳೆದ 14 ವರ್ಷಗಳಿಂದ ಮಂತ್ರಾಲಯದ ಒಂದಲ್ಲಾ ಒಂದು ಸಾಂಸ್ಕೃತಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳ ನಿರೂಪಣೆಯನ್ನು (Anchoring) ಮಾಡುವ ಮಹದವಕಾಶ ರಾಯರ ಕೃಪೆಯಿಂದ ಸಿಕ್ಕಿದೆ. ಇದನ್ನು ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನದ ಪರಮ ಸೌಭಾಗ್ಯ ಹಾಗೂ ಅತಿದೊಡ್ಡ ಸಾಧನೆ ಎಂದು ಭಾವಿಸುತ್ತೇನೆ.

ಯಾವಾಗ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಗುರುಗಳನ್ನು ಕಣ್ಣಾರೆ ಕಾಣುತ್ತೇವೆಯೋ, ಆಗ ಸಾಕ್ಷಾತ್ ರಾಯರೇ ಅವರ ರೂಪದಲ್ಲಿ ನಮ್ಮೆದುರು ನಿಂತಿದ್ದಾರೆ ಎನಿಸುತ್ತದೆ. ಕಲ್ಮಶವಿಲ್ಲದ ನಿಷ್ಕಲ್ಮಶ ಭಕ್ತಿಗೆ ರಾಯರ ಅನುಗ್ರಹದ ಶಕ್ತಿ ಸದಾ ಜೊತೆಯಿರುತ್ತದೆ ಎಂಬುದಕ್ಕೆ ಇವತ್ತಿಗೂ ನಮ್ಮ ನಡುವೆ ಅದೆಷ್ಟೋ ಜೀವಂತ ಉದಾಹರಣೆಗಳು ಸಿಗುತ್ತವೆ.

ಯಾವುದೇ ಸ್ವಾರ್ಥವಿಲ್ಲದೆ, ನಂಬಿ ಬಂದವರ ಕೈಹಿಡಿಯುವ ಕಲ್ಪವೃಕ್ಷ, ಕಾಮಧೇನು ನಮ್ಮ ಗುರುರಾಯರು. ರಾಯರು ಎನ್ನುವ ಆ ಪ್ರತ್ಯಕ್ಷ ದೈವ ಎಲ್ಲರಿಗೂ ಒಳಿತನ್ನು ಮಾಡಲಿ. ಸದಾ ನೆನೆಯೋಣ... ರಾಯರಿದ್ದಾರೆ!
(ಸಾಮಾಜಿಕ ಜಾಲತಾಣ)

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆವಿದ್ಯಾರ್ಥಿಗಳು ಗಣಕೀಕೃತ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಬೇಕು: ಡಾ.ಪ್ರವೀಣ ಹುಲ್ಲೋಳಿಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ : ಯಾವ ವಸ್ತುಗಳು ಅಗ್ಗವಾಗಲಿವೆ ? ಯಾವ್ಯಾವುದು ದುಬಾರಿಯೇ ಇರಲಿವೆ ?ಪ್ರಧಾನಿ ನಿವಾಸದಲ್ಲಿ ಬಿಜೆಪಿ ಉನ್ನತ ನಾಯಕರ ಸಭೆ: ಸಂಪುಟ ಪುನಾರಚನೆ ಕುತೂಹಲಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿ